Aug 22, 2022 : ನಿತ್ಯ ಸಹಾಯ ಮಾತಾ ದೇವಾಲಯ ಗಂಟಾಲ್ ಕಟ್ಟೆ, ಕಥೋಲಿಕ್ ಸಭಾ ಮಂಗ್ಳೂರ್ ಪ್ರದೇಶ್ (ರಿ.) ಗಂಟಾಲ್ ಕಟ್ಟೆ ಘಟಕ ಮತ್ತು ಲಯನ್ಸ್ ಕ್ಲಬ್‌ ಮೂಡುಬಿದಿರೆ ಇದರ ಸಂಯುಕ್ತ ಆಶ್ರಯದಲ್ಲಿ ಗಂಟಾಲ್ ಕಟ್ಟೆಯ ನಿತ್ಯಾಧರ್ ಸಭಾಭವನದಲ್ಲಿ ಆ. 21ರಂದು ರಸ್ತೆ ಸುರಕ್ಷತಾ ಮಾಹಿತಿ ಶಿಬಿರ ನಡೆಯಿತು.

ಕಥೋಲಿಕ್ ಸಭಾ ಗಂಟಾಲ್ ಕಟ್ಟೆ ಘಟಕದ ಅಧ್ಯಕ್ಷ ಮೆಲ್ವಿನ್ ಡಿಕೋಸ್ತ ಅವರ ಅಧ್ಯಕ್ಷತೆಯಲ್ಲಿ ನಡೆದ ಶಿಬಿರವನ್ನು ಉದ್ಘಾಟಿಸಿದ ಗಂಟಾಲ್ ಕಟ್ಟೆ ಚರ್ಚ್ ಧರ್ಮಗುರು ರೆ.ಫಾ. ರೊನಾಲ್ಡ್ ಪ್ರಕಾಶ್ ಡಿಸೋಜ ಅವರು ಮಾತನಾಡಿ ಸ್ವಾತಂತ್ರ್ಯವಿದೆ, ಸ್ವ ಇಚ್ಛೆಯಿಂದ ಎಲ್ಲಿ ಬೇಕಾದರೂ, ಹೇಗೆ ಬೇಕಾದರೂ ವಾಹನಗಳಲ್ಲಿ ಓಡಾಡಬಹುದು ಎಂಬ ಭಾವನೆಯೇ ಬಹುತೇಕ ಅಪಘಾತಗಳಿಗೆ ಕಾರಣವಾಗಿದೆ. ಜೀವ ನಮಗೆ ವರದಾನ, ದೇವರು ನೀಡಿರುವ ಜೀವಗಳನ್ನು ನಿಯಮಗಳನ್ನು ಪಾಲಿಸಿಕೊಂಡು ಜವಾಬ್ದಾರಿಯುತವಾಗಿ ವರ್ತಿಸಿದರೆ ಅಪಘಾತವಿಲ್ಲದೆ ಸುರಕ್ಷಿತವಾಗಿ ಇರಲು ಸಾಧ್ಯ. ನಮ್ಮ ಜೀವದ ಜೊತೆಗೆ ಇತರರ ಕೂಡಾ ಚಿಂತಿಸಿಕೊಂಡು ವಾಹನ ಚಲಾಯಿಸುವುದು ಪ್ರತಿಯೊಬ್ಬ ಚಾಲಕರ ಜವಾಬ್ದಾರಿಯಾಗಿದೆ ಎಂದರು.

ಚಾಲನಾ ನಿಯಮಗಳ ಬಗ್ಗೆ ಮಾಹಿತಿ ನೀಡಿದ ಸಂಪನ್ಮೂಲ ವ್ಯಕ್ತಿ ಮೂಡುಬಿದಿರೆ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ನಿರಂಜನ್ ಕುಮಾರ್ ಮಾತನಾಡಿ ರಸ್ತೆಯಲ್ಲಿ ನಾವು ಸುರಕ್ಷಿತವಾಗಿರಬೇಕಾದರೆ ಮೊದಲು ನಮ್ಮ ಸಂಚಾರ ಸುರಕ್ಷಿತವಾಗಿರಬೇಕು. ನಾವು, ವಾಹನ ಮತ್ತು ರಸ್ತೆ ಇವು ಮೂರೂ ನಿಖರವಾಗಿದ್ದರೆ ಸುರಕ್ಷಿತ ಸಂಚಾರ ಸಾಧ್ಯ. ವಾಹನದ ದಾಖಲೆ ಪತ್ರ, ಚಾಲನಾ ಪರವಾನಿಗೆ, ವಾಹನದ ಫಿಟ್ನೆಸ್, ಚಾಲಕರ ಮೆಡಿಕಲ್ ಫಿಟ್ನೆಸ್, ಚಾಲನಾ ಜಡ್ಜ್ ಮೆಂಟ್, ಸೈನ್ ಬೋರ್ಡ್ ಗಳ ಬಗ್ಗೆ ಅರಿವು, ವಾಹನ ವಿಮೆ ಎಲ್ಲವೂ ಇರಬೇಕು. ಅತಿವೇಗದ ಚಾಲನೆ, ಓವರ್ ಟೇಕಿಂಗ್, ತಡರಾತ್ರಿಯ ನಿದ್ದೆ, ಅಮಲಿನ ಚಾಲನೆ, ಅಟೆನ್ಶನ್ ಡೈವರ್ಟ್ ಬಹುತೇಕ ಅಪಘಾತಗಳಿಗೆ ಕಾರಣವಾಗಿದ್ದು ಎಲ್ಲಾ ಚಾಲಕರೂ ಸರಿಯಾದ ನಿಯಮ ಪಾಲಿಸಿದರೆ ಸುರಕ್ಷಿತವಾಗಿ ಇರಲು ಸಾಧ್ಯ ಎಂದರು.

ಲಯನ್ಸ್ ಜಿಲ್ಲೆ 317ಡಿಯ ರಸ್ತೆ ಸುರಕ್ಷತಾ ವಿಭಾಗದ ಜಿಲ್ಲಾ ಸಂಯೋಜಕ ಶಿವಪ್ರಸಾದ್ ಹೆಗ್ಡೆ ದೃಶ್ಯ ಮಾಧ್ಯಮದ ಮೂಲಕ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಿದರು. ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಡೇನಿಯಲ್ ಡಿಸಿಲ್ವ ತಮ್ಮ ಅನುಭವ ಹಂಚಿಕೊಂಡರು. ಲಯನ್ಸ್ ಅಧ್ಯಕ್ಷ ದಿನೇಶ್ ಎಂ.ಕೆ, ಕಾರ್ಯದರ್ಶಿ ಆರ್.ಎಂ. ಹೆಗ್ಡೆ, ಚರ್ಚ್‌ನ 21 ಆಯೋಗಗಳ ಸಂಚಾಲಕ ಸುನಿಲ್ ಮಿರಾಂದಾ, ಕಥೋಲಿಕ್ ಸಭಾ ಕಾರ್ಯದರ್ಶಿ ವಿಲಿಯಂ ಉಪಸ್ಥಿತರಿದ್ದರು.

ಮೆಲ್ವಿನ್ ಡಿಕೋಸ್ತ ಸ್ವಾಗತಿಸಿದರು. ಆಲ್ವಿನ್ ಎಸ್ ಮಿನೇಜಸ್ ಪ್ರಾರ್ಥಿಸಿದರು. ಅರುಣ್ ಪಿರೇರಾ, ರೊನಾಲ್ಡ್ ಸೆರಾವೊ, ವಿಕ್ಟರ್ ಸಿಕ್ವೇರಾ ಸಹಕರಿಸಿದರು. ಆಲ್ವಿನ್ ಮಿನೇಜಸ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಹರೀಶ್ ತಂತ್ರಿ ಧನ್ಯವಾದವಿತ್ತರು.

Comments powered by CComment

Latest News

Home | About | NewsSitemap | Contact

Copyright ©2015 www.catholicsabha.org. Powered by eCreators

Catholic Sabha Mangalore Pradesh (R)
Bishop's House
Kodialbail Post
Mangalore - 575 003

Phone: 0824-2427474